ಆಗಿನ್ನೂ ಶಂಭು ಸ್ಕೂಲಿಗೆ ಹೋಗುತ್ತಿದ್ದ. ಅವನ ಖಾಸ ದೋಸ್ತ್ ಜಮೀಲ್. ಇಬ್ಬರದೂ ಒಟ್ಟಿಗೆ ಊಟ-ಆಟ-ಪಾಠ. ಅದೇ ಸ್ಕೂಲು. ಎದುರು-ಬದರು ಮನೆ. ಶಂಭು ಹೆತ್ತವರು ತಿಳಿದೋರು ಹಾಗು ಜಮೀಲ್ ಹೆತ್ತವರು ಮುಗ್ಧರು ಆಗಿದ್ದರಿಂದ ಈ ಜೋಡಿಗೆ ಯಾವುದೇ ಕಡಿವಾಣವಿರಲಿಲ್ಲ. ಶಂಭು ಅಪ್ಪ ಸ್ಕೂಲ್ ಮೇಷ್ಟ್ರು. ಜಮಿಲ್ ಅಪ್ಪ ಐಸ್ ಕ್ಯಾಂಡಿ ಮಾರೋರು.
ಹೀಗೆ ಒಂದು ದಿನ, ಜಮೀಲ್ ಅಪ್ಪ ಐಸ್ ಕಂಡಿ ಮಾರೋಕೆ ಹೋದೋರು ವಾಪಸ್ ಬರಲೇ ಇಲ್ಲ. ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಎಷ್ಟು ದಿನ ಕಾಯ್ದರೂ ಹಿಂದಿರುಗಲೇ ಇಲ್ಲ. ಊರಿನೋರೆಲ್ಲ ನೊರೆಂಟು ತರಹ ಆಡಿಕೊಂಡರು.
'ಆಯಪ್ಪಂಗೆ ಆ ಕೆಟ್ಟ ಖಾಯಿಲೆ ಇತ್ತಂತೆ'
'ಯಾವುದೊ ಹೆಂಗಸಿನ ಸಹವಾಸ ಇತ್ತಂತೆ'
'ಎಲ್ಲೋ ಸಕತ್ ಸಾಲ ಮಾಡ್ಕೊಂಡಿದ್ನಂತೆ'
'ಲಾರಿ ಹತ್ಕೊಂಡು ಬಾಂಬೆಗೆ ಹೋದನಂತೆ'
'ಎಲ್ಲೋ ಹೊಡೆದಕವ್ರೆ'
ಜಮೀಲ್ ತಾಯಿ ಇವೆಲ್ಲವನ್ನೂ ಸಹಿಸಿಕೊಳ್ಳಬೇಕಾಯಿತು. ಜೀವನ ನಿರ್ವಹಿಸಲು ಸ್ವತಃ ತಾವೇ ಐಸ್ ಕ್ಯಾಂಡಿ ಮಾರಲು ಮುಂದಾದರು. ಜಮೀಲ್ ಕೂಡ ಅವರ ಜೊತೆ ಸ್ಕೂಲ್ ಬಿಟ್ಟು ಕೆಲಸಕ್ಕೆ ಹೋಗಬೇಕಾಯಿತು. ತಂದೆಯ ಗಾಡಿಯನ್ನು ಊರಿನ ಸ್ಕೂಲ್ ಮುಂದೆ ನಿಲ್ಲಿಸಿ ದಿನ ಪೂರ್ತಿ ಐಸ್ ಕ್ಯಾಂಡಿ ಮಾರುವುದು ಅವನ ಕೆಲಸ.
ಇಷ್ಟೆಲ್ಲಾ ಅದರೂ ಜಮೀಲ್-ಶಂಭು ಮೊದಲಿದ್ದ ಹಾಗೆಯೇ ಇದ್ದರು. ಈಗಲೂ ಒಟ್ಟಿಗೆ ಸ್ಕೂಲಿಗೆ ಹೋಗುತ್ತಿದ್ದರು. ವಿಪರ್ಯಾಸವೆಂದರೆ ಶಂಭು ಶಾಲೆಯ ಒಳಗೆ, ಜಮೀಲ್ ಕಂಪೊಂಡಿನ ಹೊರಗೆ. ಮದ್ಯಾಹ್ನ ಒಟ್ಟಿಗೆ ಊಟ. ಸಾಯಂಕಾಲ ಜೊತೆಗೆ ನಡೆದು ಮನೆ ಸೇರುತ್ತಿದ್ದರು. ವಾಸ್ತವದ ಅರಿವಿಲ್ಲದ, ಸುಖ-ದುಃಖಗಳ ವ್ಯತ್ಯಾಸ ತಿಳಿಯದ ಎರಡು ಪುಟ್ಟ ಹೃದಯಗಳು, ಯಾವುದೇ ಆಗು-ಹೋಗುಗಳ ಪರಿವಿಲ್ಲದೆ ಕಾಲ ಚಕ್ರದೊಳಗೆ ಲೀನವಾಗಿದ್ದವು.
ಜನರ ಕಣ್ಣು, ಬಾಯಿ ಬಹಳ ದಿನ ಜಮೀಲ್ ತಾಯಿಯನ್ನು ಬದುಕಲು ಬಿಡಲಿಲ್ಲ.
ಬಾಂಬೆಯಲ್ಲಿ ಕೆಲಸ ಮಾಡುತ್ತಿದ್ದ ಜಮೀಲ್ ತಾಯಿಯ ಅಣ್ಣ ಮಣ್ಣಿನ ದಿನ ಬಂದು ಜಮೀಲ್ನನ್ನು ತನ್ನೊಟ್ಟಿಗೆ ಕರೆದೊಯ್ಯ್ದರು.
ಅಂದಿಗೆ ಜಮೀಲ್-ಶಂಭುವಿನ ಸಂಪರ್ಕ ಕಡಿದು ಬಿತ್ತು.
ಹೊರಡುವ ದಿನ ಒಟ್ಟಿಗೆ ಬಸ್ ಸ್ಟಾಂಡಿನವರೆಗೆ ಜೊತೆ-ಜೊತೆಯಲ್ಲೇ ಸಾಗಿ ಕೈ ಬೀಸಿದ್ದಷ್ಟೇ ನೆನಪು. ಮತ್ತೆ ಯಾವಾಗ ಸಿಗುವುದು, ಹೇಗೆ ಸಿಗುವುದು, ಹೋಗುತ್ತಿರುವ ವಿಳಾಸವಾದರೂ ಏನು ಎಂಬ ಪ್ರಶ್ನೆಗಳು ಇಬ್ಬರಿಗೂ ಮೂಡಲೇ ಇಲ್ಲ. ಹೃದಯಗಳು ಖಾಲಿ-ಖಾಲಿಯಾಗಿದ್ದವೆಂಬುದಷ್ಟೇ ಗೊತ್ತು. ಜಮೀಲ್ ಗೆ ತಾನು ಹೋಗುತ್ತಿರುವುದು ಎಲ್ಲಿಗೆ ಎನ್ನುವ ಸೂಚನೆಯೂ ಇರಲಿಲ್ಲ, ಕೇಳುವ ಧೈರ್ಯವೂ ಇರಲಿಲ್ಲ. ಇಬ್ಬರಲ್ಲಿ ತುಂಬಿದ್ದ ಗಾಡಾನ್ಧಕಾರದ ಮೌನ ಬೇರೆಲ್ಲವನ್ನೂ ನುಂಗಿ ಹಾಕಿತ್ತು.
*****
ಗಾಡಿಯನ್ನು ನೋಡುತ್ತಿದ್ದಂತೆ ಶಂಭುವಿನ ಕೈಗಳು ನೇತು ಹಾಕಿದ್ದ ಅಂಗಿಯ ಒಳ ಹೊಕ್ಕು ಯಾವುದೊ ಒಂದು ನೋಟು ತೆಗೆದರೆ, ಕಾಲ್ಗಳು ಸರ ಸರನೆ ಬಾಗಿಲ ಬಳಿಯಿದ್ದ ಚಪ್ಪಲಿ ಸೇರಿ ಮೆಟ್ಟಿಲು ಇಳಿದು ಬಿರ ಬಿರನೆ ನಡೆದು ರಸ್ತೆ ದಾಟಿ ಗಾಡಿಯ ಮುಂದೆ ತಂದು ಶಂಭುವನ್ನು ನಿಲ್ಲಿಸಿದವು. ಕೈ ಚಾಚಿ ಒಂದು ಕ್ಯಾಂಡಿ ಕೊಡಿ ಎನ್ನುವಷ್ಟರಲ್ಲಿ ಪಕ್ಕದಲ್ಲಿ ಇನ್ನೊಂದು ಕೈ ಬಂದು ನಿಂತು ನಂಗೂ ಒಂದು ಕೊಡಿ ಎಂದಿತು.
ಗಾಡಿಯವ " ಹತ್ತು ರೂಪಾಯಿಗೊಂದು" ಎಂದ.
ಶಂಭು ಚಾಚಿದ್ದ ತನ್ನ ಕೈಯನ್ನು ಮತ್ತೆ ನೋಡಿಕೊಂಡ. ಇಪ್ಪತ್ತು ರೂಪಾಯಿಯ ನೋಟು ಇತ್ತು. ಪಕ್ಕದಲ್ಲಿದ್ದ ಹತ್ತು ರೂಪಾಯಿ ಹಿಡಿದಿದ್ದ ಕೈ ಹಿಂದೆ ಸರಿದು ಮಿಣ ಮಿಣ ಮಿನುಗುತ್ತಿದ್ದ ಪುಟ್ಟ ಬ್ಯಾಗೊಂದರ ಒಳಗೆ ಏನೋ ಹುಡುಕಲು ಶುರು ಮಾಡಿತು. ಒಳಗೆ ಇನ್ನೊಂದು ಹತ್ತು ರೂಪಾಯಿ ನೋಟು ಕಂಡಿತು. ಶಂಭು ಸುಮ್ಮನೆ ತಲೆಎತ್ತಿದ. ಆಕೆಯೂ ಸಪ್ಪೆ ಮೋರೆಯಿಂದ ತಲೆಯೆತ್ತಿದಳು.
ಗಾಡಿಯವ "ಕೊಡಲಾ ತಾಯಿ?"
ಅವಳು "ಎರಡು ರೂಪಾಯಿ ಕಮ್ಮಿ ಇದೆ. ಬಸ್ ಚಾರ್ಜಿಗೆ ಬೇಕು"
"ಆಗಲ್ಲಮ್ಮ"
ಕೈಲಿದ್ದ ನೋಟನ್ನು ಬ್ಯಾಗಿಗೆ ಸೇರಿಸಿ ತಲೆ ಬಗ್ಗಿಸಿ ಹಿಂದಿರುಗಿ ಬಸ್ ಸ್ಟಾಂಡಿನ ಕಡೆಗೆ ಭಾರದ ಹೆಜ್ಜೆಗಳನ್ನು ಹಾಕತೊಡಗಿದ ಆ ಹುಡುಗಿಯನ್ನು ನೋಡಿದ ಶಂಭುವಿಗೆ ಶಾಕ್!!! ಅದೇ ನಡಿಗೆ, ಹೌದು ಕನಸಲ್ಲಿ ಕಂಡಿದ್ದೇ ನಡಿಗೆ!!!
"ಕೊಡಲಾ ಸಾರ್?"
ಶಂಭು ಚಡಪಡಿಸಲಾರಂಭಿಸಿದ. ಏನು ಮಾಡೋದು? ವಾಪಸ್ ಕರೆಯಲಾ? ಕಾಸು ನಾನೇ ಕೊಡ್ತಿನಿ ಅನ್ನಲಾ? ಅವಳು ಏನಂದು ಕೊಳ್ತಲೋ? ಅವಳು ಇವಳೇನಾ? ಕೇಳನ?
"ಸಾರ್, ಕೊಡಲಾ?"
ಇತ್ತ ಕಡೆ ಗಮನ ಕೊಡದೆ ಏನೇನೋ ಯೋಚಿಸುತ್ತ ಬಸ್ ಸ್ಟಾಂಡಿನ ಕಡೆಗೆ ನಡೆದ, ತಲೆ ಬಗ್ಗಿಸಿಕೊಂಡು. ಅವಳು ಅಲ್ಲೇ ಕುಳಿತಿದ್ದಳು. ಶಂಭುವಿನ ಕೈ ನಡುಗಲಾರಂಭಿಸಿತು. ಗಂಟಲು ಯಾವಾಗಲೋ ಒಣಗಿತ್ತು. ಉಗುಳು ನುಂಗಿಕೊಂಡು ಮೆಲ್ಲಗೆ ಪಕ್ಕದ ಕಲ್ಲಿನ ಮೇಲೆ ಕುಳಿತ. ಬೆವರಿನ ಮೇಲೆ ಬೆವರು. ಮೆಲ್ಲಗೆ, ಸಣ್ಣಗೆ ಆ ಕಡೆ ಕಣ್ಣು ಹಾಯಿಸಿದ. ಅವಳ ಎಡಗೈ ಬಿಳಿಯ ಕರ್ಚೀಪ್ ಅನ್ನು ಹಿಡಿದು ಕಲ್ಲಿಗೆ ಒರಗಿತ್ತು. ಕಾಲ್ಗಳು ಸುರುಳಿ ಸುತ್ತಿದ್ದವು. ಕಣ್ಣು ಹಾಗೆ ಮೇಲೆ ಹಾಯಿಸಿ ನೋಡಿದರೆ ತಿಳಿ ಕೆಂಪಿನ ತುಟಿಗಳ ಮದ್ಯೆ ಪಳ ಪಳ ನೆ ಹೊಳೆಯುತ್ತಿದ್ದ ಹಲ್ಲುಗಳು ಬಲಗೈ ಉಗುರು ಕಚ್ಚುತ್ತಿದ್ದವು. ಕಣ್ಣು ಬಸ್ ಬರುವ ಕಡೆಗೇ ನೆಟ್ಟಿದ್ದವು. ಎಡ ಕಿವಿ ಮೇಲಿದ್ದ ಜ್ಹುಮುಕಿ ಬಹು ಜೋರಾಗಿ ತೂಗುತ್ತಿತ್ತು. ಸಾವರಿಸಿಕೊಂಡು ಮಾತಾಡಿಸಲು ಶಂಭು ಬಾಯಿ ತೆರೆಯುತ್ತಾನೆ. ಉಸಿರು ಹೊರ ಬಂದು ಅವಳ ಕಿವಿ ನಾಟುವ ಹೊತ್ತಿಗೆ ಅವಳು ಎದ್ದು ಎಲ್ಲಿಗೋ ಹೊರಡುತ್ತಾಳೆ. ಹೊರ ಬಂದು ಉಸಿರು ತುಸು ದೂರ ಸಾಗಿ ಸತ್ತು ಹೋಗುತ್ತದೆ.
"ಛೇ"
ಎಂದು ತನ್ನನು ತಾನೆ ಹಳಿಯುತ್ತಾ ಶಂಭು ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಹಾಗೆ ಹಿಂದಕ್ಕೆ ಒರಗುತ್ತಾನೆ.
ನಾನ್ಯಾಕೆ ಹಿಂಗೆ? ನನಗೇ ಯಾಕೆ ಹೀಗೆಲ್ಲ? ನಾನು ಬದುಕಿರುವುದೂ ದಂಡ. ಒಂದು ಹುಡುಗಿಯನ್ನು ಮಾತನಾಡಿಸುವ ಧೈರ್ಯವಿಲ್ಲ. ಒಂದು ಕೆಲಸ ಅಚ್ಚು ಕಟ್ಟಾಗಿ ಮಾಡೋ ತಾಕತ್ ಇಲ್ಲ. ಒಂದು ಮಾಡಿದ್ರೆ ಇನ್ನೊಂದು ಆಗುತ್ತೆ. ಕಾಲೇಜಲ್ಲಿ ಎದ್ದು ಪ್ರಶ್ನೆ ಕೇಳೋ ಗುಂಡಿಗೆ ಇಲ್ಲ. ಉತ್ತರ ಗೊತ್ತಿದ್ದರೂ ನಿಂತು ಹೇಳೋಕಾಗಲ್ಲ. ಯಾರದ್ರು ಹಿಂದೆಯಿಂದ ಗುದ್ದಿದ್ದರೆ ಜಗಳ ಕಾಯ್ದು ಗೆಲ್ಲೋಕೆ ಬರೋಲ್ಲ. ಬಸ್ಸಲ್ಲಿ ಅಪ್ಪಿ ತಪ್ಪಿ ಯಾವ್ದೋ ಹೆಂಗಸಿಗೆ ಕೈ ತಾಕಿದಾಗ ಬಸ್ಸೆಲ್ಲ ನೋಡುವಂತೆ ಮರ್ಯಾದೆ ತೆಗೆದರೂ ಉಸಿರೆತ್ತುವ ಧೈರ್ಯ ಇಲ್ಲ, ಕಾದಾಡಿ-ಗುದ್ದಾಡಿ ಒಂದು ಬಿಂದಿಗೆ ನೀರು ಹಿಡಿಯೋಕೆ ಬರದೆ ಎಸ್ಟೋ ಸಾರಿ ಅಮ್ಮನೇ ಬಯ್ದದ್ದುಂಟು. ಯಾರೂ ಹಿಂದಿನಿದಿಂದ ಗಾಡಿಗೆ ಡಿಕ್ಕಿ ಹೊಡೆದರೂ ಕೇಳಿ ದಂಡ ವಸೂಲಿ ಮಾಡದೇ ಅಪ್ಪನ ಕೈಲಿ ಬಯ್ಸಿಕೊಂಡದ್ದೂ ಉಂಟು. ನಾನೊಬ್ಬ ಭೂಮಿಗೆ ಭಾರವಾದ ವಸ್ತು, ಅಲ್ಲ, ನನಗೇ ಭಾರವಾದ ವಸ್ತು....
ಹೀಗೆ ಶಂಭು ಪ್ರತಿ ಸಲದಂತೆ ತಲೆ ಖಾಲಿಯಾಗುವ ತನಕ, ಹೊಟ್ಟೆ ಹಸಿಯುವ ತನಕ, ನಿದ್ದೆ ಬರುವ ತನಕ, ಯಾರಾದರೂ ನೋಡಿ ಮೆಂಟಲ್ ಅನ್ನುವ ತನಕ ಸಾವಿರದ ನೂರ ಒಂದನೇ ಬಾರಿ ತನ್ನನ್ನು ತಾನು ಜರಿಯತೊಡಗಿದಾಗ ...
"ಏನಮ್ಮಾ, ಬಾ ಇಲ್ಲಿ." ಗಾಡಿಯೋನು ಕೂಗಿದ.
ಅರಳಿದ ಕಂಗಳಿಂದ ಆ ಹುಡುಗಿ ತಿರುಗಿ ನೋಡಿ ಓಡೋಡಿ ಬರುತ್ತಾಳೆ. ಗಾಡಿಯೋನು ಕ್ಯಾಂಡಿ ಕೊಡುತ್ತ
" ನಾನು ಇಲ್ಲಿಯವನಲ್ಲ, ನಾಳೆ ಈ ಕಡೆ ಬಾರೋ ಗ್ಯಾರಂಟಿ ಇಲ್ಲ. ನೀನು ಇಲ್ಲಿಯವಳೇ ಅನ್ಸುತ್ತೆ. ಆ ಹುಡುಗನೂ ಇಲ್ಲಿಯವನೇ ಇರಬೇಕು. ಅವನಿಂದ ಮಿಕ್ಕಿದ ದುಡ್ಡು ನೀನು ಈಸಿ ಕೊಟ್ರೆ ನಾಳೆ ಅವನಿಗೆ ನೀನು ಕೊಡಬಹುದು"
ಆ ಹುಡುಗಿ ಕನ್ಫ್ಯೂಸ್ ಮುಖದಿಂದ ಶಂಭುವಿನ ಕಡೆಗೆ ತಿರುಗಿ ನೋಡಿ ಆಮೇಲೆ ಗಾಡಿಯವನಿಗೆ ಏನೋ ಹೇಳಲು ಹೊರಟಾಗ, ಗ್ರೇಸ್ ಮಾರ್ಕಿಂದ ಪಾಸದಷ್ಟು ಖುಷಿಯಿಂದ ಶಂಭು ಓಡಿ ಬಂದು " ಪರವಾಗಿಲ್ಲ, ನಾನು ಕೊಡ್ತಿನಿ, ನಿಮ್ಮ ಹೆಸರು ಏನು? ಯಾವೂರು? ....." ಅಂತ ಬಡ ಬಡಂಥ ಒಂದೇ ಉಸಿರಲ್ಲಿ ಕೇಳಲು ಶುರು ಮಾಡಿದಾಗ, ಗಾಡಿಯವ " ಸ್ವಾಮಿ, ಎರಡು ರೂಪಾಯಿಗೆ ಎಷ್ಟೆಲ್ಲಾ ಕೇಳ್ತೀರಿ. ಆದ್ರೆ ಕೊಡ್ರಿ. ಇಲ್ಲಾಂದ್ರೆ ಹೋಗ್ರಿ" ಎಂದು ಬಯ್ದಾಗಲೇ ತನ್ನ ಬಾಯಿ ಮುಚ್ಚಿದ್ದು.
ಮತ್ತೆ ಮಾತಿಲ್ಲದೆ ತಂದಿದ್ದ ನೋಟು ಅವನ ಕೈಗಿಟ್ಟು ಕ್ಯಾಂಡಿಯನ್ನು ಚಪ್ಪರಿಸುತ್ತ ಆ ಹುಡುಗಿಯ ಮುಖವನ್ನೇ ದಿಟ್ಟಿಸುತ್ತ ಎರಡೂ ಕ್ಯಾಂಡಿಯ ಬಣ್ಣವನ್ನು ತಾಳೆ ಹಾಕಿ ಆ ಬಣ್ಣಗಳಿಗಿರುವ ಸಾಮ್ಯತೆಯನ್ನು ಕಂಡು ಹಿಡಿಯಲು ಯಾವ ಪುಸ್ತಕ ನೋಡಬೇಕೆಂದು ಮತ್ತು ಯಾವ ಜ್ಯೋತಿಷಿಯನ್ನು ಕೇಳಬೇಕೆಂದು ಮನದಲ್ಲೇ ಲೆಕ್ಕಾಚಾರ ಹಾಕಲು ಶುರು ಮಾಡಿದ.
ಅವಳೂ ಕ್ಯಾಂಡಿಯನ್ನು ಚಪ್ಪರಿಸುತ್ತ " ನಿಮ್ಮ ಹೆಸರು ಏನು?" ಎಂದಳು.
"ಶಂಭು, ನಿಮ್ಮದು?"
"ನೋಡಿ, ನೀವಂದುಕೊಂಡಂತೆ ನಾನು ಇಲ್ಲಿಯವಳಲ್ಲ. ಸ್ಟಾಪ್ ಸರಿಯಾಗಿ ಗೊತ್ತಿಲ್ಲದೆ ಇಲ್ಲಿ ಇಳಿದೆ. ನಿಮಗೆ ಎರಡು ರೂಪಾಯಿ ಹೇಗೆ ಕೊಡಲಿ?"
"ಅಯ್ಯೋ, ಇರಲಿ ಬಿಡ್ರಿ . ನಿಮ್ ನಂಬರ್ ಕೊಡ್ರಿ "
"ನನ್ನತ್ತ್ರ mobile ಇಲ್ಲ."
" ಓಹೋ , ನಿಮ್ಮ ಹೆಸರೇ ಹೇಳಲಿಲ್ಲ?"
"..."
******(ಮುಂದುವರಿಯುವುದು)************